ಬಾಲ್ಯ ಎಂದೊಡನೆ
ನೆನಪುಗಳ ಹಚ್ಚನೆಯ ತೋರಣ.ಮನಸಿಗೆ ನಚ್ಚನೆಯ ಕಚಗುಳಿ. ತುಂಬಿದ ಮನೆ. ನಾವು ಹನ್ನೊಂದು ಮಕ್ಕಳು. ಇಂದು ಒಬ್ಬರನ್ನೋ ಇಬ್ಬರನ್ನೋ ಬೆಳೆಸಲು ಪಾಲಕರು ಹೆಣಗಾಡುವದನ್ನು ಕಂಡಾಗಲೆಲ್ಲ ನನ್ನ ತಂದೆ-ತಾಯಿ ನೆನಪಾಗುತ್ತಾರೆ ಯಾವುದಕ್ಕೂಅತಿಯಾಗಿ ತಲೆ ಕೆಡಿಸಿಕೊಳ್ಳದ ವಿಚಿತ್ರ ಸ್ಥಿತಪ್ರಜ್ನತೆ ಅವರಲ್ಲಿತ್ತು. ನಮಗ್ಯಾರಿಗೂ ವಿಶೇಷ ಗಮನವನ್ನು ಅವರು ಕೊಡಲಾಗದಿದ್ದರೂ ಅಲಕ್ಷವನ್ನೂ ಮಾಡಲಿಲ್ಲ. ಚೆನ್ನಾಗಿಯೇ ಬೆಳೆದೆವು. ದೊಡ್ಡ ಮಕ್ಕಳಿಗೆ ಸಣ್ಣವಾದ ಬಟ್ಟೆಗಳು ಚಿಕ್ಕವರಿಗೆ. ವರ್ಷಕ್ಕೆ ಎರಡೇ ಜೋಡಿ ಹೊಸ ಬಟ್ಟೆ. ಅದು ಮದುವೆ-ಮುಂಜಿ ಮುಂತಾದೆಡೆ ಹೋಗುವಾಗ ತೊಡಲು. ನಮ್ಮ ನಮ್ಮಲ್ಲೇ ಉಡುಪುಗಳನ್ನು ಅದಲು-ಬದಲು ಮಾಡಿಕೊಳ್ಳುತ್ತಿದ್ದೆವು. ಹೆಚ್ಚಿನ ಸುಖ-ಸವಲತ್ತುಗಳಿರದೇ ಇದ್ದರೂ ಯಾವತ್ತೂ ಕೊರತೆ, ಕೊರಗು ಕಾಡಲಿಲ್ಲ . ತಂದೆಯವರು ಊರಿನ ಶಾನುಭೋಗರಾದುದ್ದರಿಂದ ಸದಾ ಮನೆಯಲ್ಲಿ ಜನಜಂಗುಳಿ. ಚಹಾ ಮಾಡುವ ಒಲೆಯೇ ಬೇರೆಯಿತ್ತು. ಅದರ ಮೇಲೆ ದಿನವಿಡೀ ಚಹದ ತಪ್ಪಲೆ.(ಪಾತ್ರೆ) ಇದಿಷ್ಟು ಮನೆಯ ವಾತಾವರಣವಾದರೆ, ನಮ್ಮ ತುಂಟಾಟಗಳ ಕಥೆಯೇ ರೋಚಕ. ಎಂಟು ಮಂದಿ ಅಣ್ಣ-ತಮ್ಮಂದಿರ ನಡುವೆ ಬೆಳೆದ ನನಗೆ ಗಂಡುಬೀರಿಯೆಂತಲೇ ಹೆಸರು ಬಿದ್ದಿತ್ತು. ಲಗೋರಿ, ಡಪ್ಪಾಂಡುಪ್ಪಿ ಆಡಿ ಮನೆ ಸೇರುವಾಗ ರಾತ್ರಿ ಎಂಟು ಹೊಡೆದಿರುತ್ತಿತ್ತು. ಮೆಲ್ಲಗೆ ಆಯಿಯ ಕಣ್ಣು ತಪ್ಪಿಸಿ ಓದಲು ಕೂಡುವದು.ಒಮ್ಮೆ ಶಾಲೆಗೆ ತಡವಾಗಿ ಹೋದಾಗ ಪ್ರಮೀಳಕ್ಕೋರು (ಮೇಡಂ) ಗಾಳಿ ಮರದ ಬರಲು(ಕೋಲು) ತರಿಸಿ ಅಂಗೈ ಮೇಲೆ ಒಂದು,ಎರಡು,ಮೂರು ಹೊಡೆಯುತ್ತಿದ್ದಂತ್ತೆ ಸರಕ್ಕನೆ ಕೋಲು ಕಸಿದು ನಾನು ತಿರುಗಿ ಹೊಡೆದಿದ್ದು ಊರಲ್ಲೆಲ್ಲ ದೊಡ್ಡ ಸುದ್ದಿಯಾಗಿ, ಎಲ್ಲರೂ ನನ್ನನ್ನು ವಿಚಿತ್ರವಾಗಿ ನೋಡತೊಡಗಿದ್ದು,ಶಿಕ್ಷೆ ಯ ರೂಪವಾಗಿ ನನಗೆ ಶಾಲೆಯ ಸುತ್ತಲೂ ಹತ್ತು ಸುತ್ತು ಓಡಲು ಹಚ್ಚಿದ್ದು , 'ಶಾನುಭೋಗರ ಮನೆ ಕೂಸು ಅಕ್ಕೋರಿಗೇ ಹೊಡತ್ತಡಲೇ' ಎಂಬ ಹಣೆಪಟ್ಟಿ ನನಗೆ ಬಿದ್ದಿದ್ದು , ಸಿಹಿ-ಹುಳಿ ನೆನಪುಗಳ ಮೆರವಣಿಗೆ. ಏನೇ ಇದ್ದರೂ ಬಾಲ್ಯದ ಆಟಪಾಟ,ಹಟ ಎಲ್ಲವೂ ಎಂದೆಂದೂ ಮರೆಯಲಾರದ ನೆನಪಿನ ಬುತ್ತಿ...........ಉಷಾ ಗದ್ದಗಿಮಠ