Tuesday, 10 April 2018

ಕಿರುಕತೆ -- ಕೊಡುಗೆ



'ಅಮ್ಮಾ, ಅಮ್ಮಾ,  ಇವತ್ತು ನಿನ್ನಹುಟ್ಟಿದ ಹಬ್ಬ ಅಲ್ವಾ? ಏನು celebration?? ' ಮಗಳು ಮುದ್ದುಗರೆದಳು.ಪಲಾವ್ , ಕೇಸರಿಭಾತ್ ,ಬೋಂಡಾ ರೆಡಿಯಾಗುವಷ್ಟರಲ್ಲಿ ಯಜಮಾನರ ಆಗಮನವಾಯಿತು. ಕೈಯಲ್ಲಿ ಗಿಫ್ಟ್ ಪ್ಯಾಕೆಟ್. ಅಚ್ಚ ಕೆಂಪು ಬಣ್ಣದ ಮೈಸೂರು ಸಿಲ್ಕ್ ಸೀರೆ. ಮೆಚ್ಚುಗೆಯಿಂದ ಯಜಮಾನರೆಡೆಗೆ ನೋಡಿದಾಗ ಅವರ ಕಣ್ಣಲ್ಲಿ ಧನ್ಯತೆಯ ಭಾವ. ಮಗಳು ಮುನ್ನಾದಿನವೇ ಸುಂದರವಾದ ವಾಚ್ ಒಂದನ್ನು  ನನಗಾಗಿ ತಂದಿಟ್ಟಿದ್ದಳು . ಮಗ ತಂದ ಹನಿಕೇಕ್ ಕತ್ತರಿಸಿ ಎಲ್ಲರ ಕೊಡುಗೆ, ಶುಭಾಶಯಗಳ ನಡುವೆ ವಿಶೇಷ ಅಡಿಗೆ ಸವಿಯುಷ್ಟರಲ್ಲಿ ಘಂಟೆ ಮೂರು. ಕೆಲಸದವಳ ಸುಳಿವಿಲ್ಲ. ನಿಂಗವ್ವ ಮೊನ್ನೆಯಿಂದಲೂ ಕೆಮ್ಮು, ನೆಗಡಿ ಎಂದು ನರಳುತ್ತಿದ್ದುದು ನೆನಪಾಯ್ತು. ಹಾಸಿಗೆ ಹಿಡಿದು ಮಲಗಿದಳೇನೋ ಎಂದಕೊಳ್ಳುವಷ್ಟರಲ್ಲಿ ಕೆಮ್ಮುತ್ತಾ ಬಂದವಳಿಗೆ ದಮ್ಮು ಹತ್ತಿತ್ತು. ಉಸಿರಾಟದ ತೊಂದರೆಗಾಗಿ  ಡಾಕ್ಟರ್ ಬರೆದುಕೊಟ್ಟ inhaler ಸಹಿತ ಕೊಂಡುಕೊಳ್ಳಲಾರದೆ ಒದ್ದಾಡುವವಳನ್ನು ಕಂಡು ಕಸಿವಿಸಿಯಾಗಿ ಅತ್ತೆಯವರು ಇಲ್ಲಿ ಬಂದಾಗ ಉಪಯೋಗಿಸುತ್ತಿದ್ದ ಹಳೆಯ inhaler  ಅನ್ನು ತಂದು ಅವಳ ಕೈಗಿತ್ತೆ. ಅದರಿಂದ ನಾಲ್ಕೈದು ಬಾರಿ  ದೀರ್ಘವಾಗಿ ಉಸಿರೆಳೆದುಕೊಂಡು , ಸುಧಾರಿಸಿಕೊಂಡು ಅವಳು ಎಂದಿನಂತೆ ಕೆಲಸ ಮಾಡತೊಡಗಿದಾಗ ಮನಸ್ಸಿಗೆ ನಿರಾಳವಾಯ್ತು. ಮರುದಿನ ಒಳ್ಳೆ ಗೆಲುವಾಗಿಯೇ  ಬಂದವಳು " ಅವ್ವಾರ, ನೀವು ಕೊಟ್ಟ ಯಂತ್ರ ಭಾಳ ಉಪಯೋಗ ಐತ್ರಿ. ಹುಟ್ಟಿದ ಹಬ್ಬದ ದಿನ ನನಗೆ ಚೊಲೊ ಗಿಫಟ್ ಕೊಟ್ಟೀರಿ . ನಿಮ್ಮನ್ನ ದೇವರು ನೂರ್ ವರ್ಸಾ ಚೆಂದಾಗಿಡ್ಲಿ. " ಕಿವಿಯವರೆಗೂ ಬಾಯಗಲಿಸಿ ಅವಳು ನಗುತ್ತಿದ್ದಂತೆ   'ನಮ್ಮಿಬ್ರದ್ದೂ ಹುಟ್ಟಿದ ದಿನ ಒಂದೇರಿ ಅವ್ವಾರ '  ಎಂದು ಯಾವಾಗಲೋ ಅವಳೆಂದಿದ್ದು ನನಗೆ ಒಮ್ಮೆಲೆ ನೆನಪಾಗಿ ಕಣ್ಣಂಚಿನಲ್ಲಿ ಒಸರಿದ ನೀರನ್ನು ಮೆಲ್ಲನೆ ಒರೆಸಿಕೊಂಡು ಮುಗುಳ್ನಗೆ ಬೀರಿದೆ...........
                   ಡಾ. ಉಷಾ ಗದ್ದಗಿಮಠ

No comments:

Post a Comment